ಬೆಂಗಳೂರು: ಮಾರ್ಚ್ 7 ರಂದು ಜನಪರ ಬಜೆಟ್ ಮಂಡನೆ ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಒತ್ತಾಯಿಸಿದ್ದಾರೆ.
ಈ ಕುರಿತು ಪತ್ರ ಬರೆದಿರುವ ಅವರು, ರಾಜ್ಯದ ಸಾಮಾಜಿಕ ಕಲ್ಯಾಣದ ಜೊತೆಗೆ ಆರ್ಥಿಕ ಜವಾಬ್ದಾರಿ ಮತ್ತು ಅಭಿವೃದ್ಧಿಯನ್ನು ಆಧರಿಸಿ ಬಜೆಟ್ ಮಂಡನೆ ಮಾಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ.
ಯಾವುದೇ ಒಂದು ಸರ್ಕಾರ ವಿತ್ತೀಯ ಬದ್ಧತೆ ಪೂರೈಸಲು ಸಾಲ ತೆಗೆದುಕೊಳ್ಳುವುದು ಸಹಜ. ಅಂತಹ ಸಾಲವನ್ನು ಬಂಡವಾಳ ಹೂಡಿಕೆಗಳಿಗೆ ಬಳಸಬೇಕೇ ಹೊರತು. ರಾಜಸ್ವ ವೆಚ್ಚಕ್ಕಲ್ಲ. ಆದರೆ, ಸತತ ಎರಡು ವರ್ಷ ರಾಜಸ್ವ ಕೊರತೆಯ ಬಜೆಟ್ ಮಂಡಿಸುವುದರೊಂದಿಗೆ ವಿತ್ತೀಯ ಹೊಣೆಗಾರಿಕೆ ಮತ್ತು ಆಯವ್ಯಯ ಕಾಯ್ದೆಯ ನಿರ್ವಹಣೆಯನ್ನು ಉಲ್ಲಂಘಿಸಿದ್ದೀರಿ.
ಎಸ್‌ಸಿಪಿ–ಟಿಎಸ್‌ಪಿ ಯೋಜನೆಗೆ ಕಾಯ್ದಿರಿಸಲಾದ ಮೊತ್ತದಲ್ಲಿ 25,426 ಕೋಟಿ ರೂಗಳನ್ನು ಇತರೆ ಯೋಜನೆಗಳಿಗೆ ಬಳಸಿಕೊಂಡಿರುವುದನ್ನು ನೀವೇ ಒಪ್ಪಿಕೊಂಡಿದ್ದೀರಿ. ಅಲ್ಲದೇ, ಲೋಕೋಪಯೋಗಿ, ನೀರಾವರಿ, ಕಂದಾಯ ಸೇರಿದಂತೆ ನಾನಾ ಇಲಾಖೆಗಳು 6,000 ಕೋಟಿ ರೂ. ಬಿಲ್ ಬಾಕಿ ಉಳಿಸಿಕೊಂಡಿವೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಹೇಳಿದ್ದಾರೆ. 15 ಬಾರಿ ಬಜೆಟ್ ಮಂಡಿಸಿರುವ ನಿಮಗೆ ಇದು ಶೋಭೆ ತರುತ್ತದೆಯೇ’ ಎಂದು ಪ್ರಶ್ನಿಸಿದ್ದಾರೆ.