ಬೆಂಗಳೂರು: ಭಾರತೀಯ ಸಾರ್ವಜನಿಕ ಆಡಳಿತ ಸಂಸ್ಥೆ (ಐಐಪಿಎ) ಮತ್ತು ಪಂಚಾಯತ್ ರಾಜ್ ಸಚಿವಾಲಯದ ಅಧ್ಯಯನದ ಪ್ರಕಾರ ಪಂಚಾಯಿತಿಗಳಿಗೆ ಅಧಿಕಾರ ವಿಕೇಂದ್ರೀಕರಣ ಶ್ರೇಯಾಂಕದಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಹೇಳಿದ್ದಾರೆ.
ರಾಜ್ಯಕ್ಕೆ ಈ ಮನ್ನಣೆ ಸಿಕ್ಕಿರುವುದು ತಳಮಟ್ಟದಲ್ಲಿ ಪ್ರಜಾಪ್ರಭುತ್ವವನ್ನು ಸಶಕ್ತಗೊಳಿಸಲು ತಮ್ಮ ಸರ್ಕಾರದ ಸಮರ್ಪಣೆಯನ್ನು ಎತ್ತಿ ತೋರಿಸುತ್ತದೆ ಎಂದು ಅವರು ಹೇಳಿದ್ದಾರೆ.
ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅರು, ‘ಭಾರತೀಯ ಸಾರ್ವಜನಿಕ ಆಡಳಿತ ಸಂಸ್ಥೆ (IIPA) ಮತ್ತು ಪಂಚಾಯತ್ ರಾಜ್ ಸಚಿವಾಲಯದ ಅಧ್ಯಯನದ ಪ್ರಕಾರ, ಪಂಚಾಯಿತಿಗಳಿಗೆ ಅಧಿಕಾರ ವಿಕೇಂದ್ರೀಕರಣ ಮಾಡಿರುವುದರಲ್ಲಿ ಕರ್ನಾಟಕವು 1ನೇ ಸ್ಥಾನದಲ್ಲಿದೆ. ಆರ್ಥಿಕ ಸ್ವಾಯತ್ತತೆ ಮತ್ತು ಹೊಣೆಗಾರಿಕೆಯಲ್ಲಿ ರಾಷ್ಟ್ರವನ್ನು ಮುನ್ನಡೆಸಿದೆ ಎಂದು ಹಂಚಿಕೊಳ್ಳಲು ಹೆಮ್ಮೆಪಡುತ್ತೇನೆ’ ಎಂದು ತಿಳಿಸಿದ್ದಾರೆ.
‘ಅಧಿಕಾರ ವಿಕೇಂದ್ರೀಕರಣ ಸೂಚ್ಯಂಕದಲ್ಲಿ ಅಗ್ರ ಶ್ರೇಯಾಂಕ (72.23) ಪಡೆದಿದೆ. ಹಣಕಾಸು ಮತ್ತು ಹೊಣೆಗಾರಿಕೆಯಲ್ಲಿ, ಪರಿಣಾಮಕಾರಿ ಹಣಕಾಸು ಹಂಚಿಕೆ ಮತ್ತು ಸಕಾಲಿಕ ನಿಧಿ ಬಿಡುಗಡೆ, 15ನೇ ಹಣಕಾಸು ಆಯೋಗದ ಅನುದಾನದ ಸಮರ್ಥ ಬಳಕೆ, ಪ್ರಬಲ ಗ್ರಾಮ ಸಭೆಗಳು ಮತ್ತು ಸಾಮಾಜಿಕ ಲೆಕ್ಕಪರಿಶೋಧನೆಗಳಲ್ಲಿ ರಾಜ್ಯವು ಮುಂದಿದೆ’ ಎಂದು ಅವರು ತಿಳಿಸಿದ್ದಾರೆ.
‘ಸಚಿವ ಪ್ರಿಯಾಂಕ್ ಖರ್ಗೆ ಅವರ ನೇತೃತ್ವದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಗ್ರಾಮೀಣ ಭಾಗದ ಪ್ರಗತಿಯನ್ನು ಹೆಚ್ಚಿಸಲು ಪಂಚಾಯಿತಿಗಳಿಗೆ ಸಂಪನ್ಮೂಲಗಳು ಮತ್ತು ಸ್ವಾಯತ್ತತೆ ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ವಿಕೇಂದ್ರೀಕರಣವು ಕೇವಲ ಪರಿಕಲ್ಪನೆಯಲ್ಲ- ಇದು ಕರ್ನಾಟಕದಲ್ಲಿ ವಾಸ್ತವವಾಗಿದೆ. ದೃಢವಾದ ಪಂಚಾಯತ್ ವ್ಯವಸ್ಥೆ ಎಂದರೆ ಬಲವಾದ ಗ್ರಾಮೀಣ ಅಭಿವೃದ್ಧಿ, ಸಹಭಾಗಿತ್ವದ ಪ್ರಜಾಪ್ರಭುತ್ವ ಮತ್ತು ಅಂತರ್ಗತ ಬೆಳವಣಿಗೆ’ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.
ಸಿದ್ದರಾಮಯ್ಯ ಅವರು ತಮ್ಮ ಪೋಸ್ಟ್‌ನೊಂದಿಗೆ ಹಂಚಿಕೊಂಡ ದಾಖಲೆಯಲ್ಲಿ, ಕರ್ನಾಟಕವು ಪಂಚಾಯಿತಿಗಳಿಗೆ ಅಧಿಕಾರ ವಿಕೇಂದ್ರೀಕರಣ ಮಾಡಿರುವುದರಲ್ಲಿ ಅನುದಾನ ಹಂಚಿಕೆ, ಕಾರ್ಯಗಳು ಮತ್ತು ಕಾರ್ಯನಿರ್ವಾಹಕರ ವಿಷಯದಲ್ಲಿ ಮೊದಲ ಸ್ಥಾನದಲ್ಲಿದೆ. ನಂತರ ಕೇರಳ, ತಮಿಳುನಾಡು, ಮಹಾರಾಷ್ಟ್ರ ಮತ್ತು ಉತ್ತರಪ್ರದೇಶ ಸ್ಥಾನ ಪಡೆದಿವೆ.
‘ರಾಜ್ಯಗಳಲ್ಲಿ ಪಂಚಾಯತ್‌ನ ವಿಕೇಂದ್ರೀಕರಣದ ಸ್ಥಿತಿಗತಿ: ಇದು ಸೂಚಿಸುವ ಪುರಾವೆ ಆಧಾರಿತ ಶ್ರೇಯಾಂಕ’ ಎಂಬ ವರದಿ ಪ್ರಕಾರ, ಕರ್ನಾಟಕ (72.23), ಕೇರಳ (70.59), ತಮಿಳುನಾಡು (68.38), ಮಹಾರಾಷ್ಟ್ರ (61.44), ಉತ್ತರ ಪ್ರದೇಶ (60.8), ಮತ್ತು ಗುಜರಾತ್ (58.26) ಸೂಚ್ಯಂಕಗಳ ಆಧಾರದ ಮೇಲೆ ಅಗ್ರ ಆರು ರಾಜ್ಯಗಳು ತಮ್ಮ ಶ್ರೇಯಾಂಕಗಳನ್ನು ಪಡೆದಿವೆ.